Sunday, May 6, 2018

ಜೀವತಳೆವಜ್ಜ
ಸೀನಿದ ಅಜ್ಜ
ಹಾಗನಿಸುವಂತ ಜೀವಂತ
ನಶ್ಯದ ಡಬ್ಬ
ಒಳಗಿವೆ ಹುಡಿ ಹುಡಿ ನೆನಹುಗಳು

ಕಾಲಾತೀತ ಅವನು ಮುಟ್ಟಿದ್ದೆಲ್ಲ
ಕತೆ ಹೇಳಲು ಕುಳಿತಿವೆ ಉಳಿದದ್ದೆಲ್ಲ

ಬಾಳ ಸಂಜೆ ಕೈ ಹಿಡಿದ ಸಂಗಾತಿ ಊರು
ಗೋಲಿಗೆ ಸದಾ ನೇತಾಡುವ ಪಾಡು
ಗಟ್ಟಿ ಗೋಡೆಗೆ ಹೊಡೆದ ಚಿಕ್ಕ ಗೂಟಕೆ

ಅವನು ಓದಿದ್ದೆಲ್ಲಾ ತಲೆಗೆ ಹತ್ತಿದ ಹಾಗೆ
ಧೂಳು ಮೆತ್ತಿದ ಚಾಳೀಸಿಗೆ
ಜ್ಞಾನ ವೃದ್ಧನ ಗಾಂಭೀರ್ಯ

‘ಎಲ್ಲಿಟ್ಟೆ? ಅಲ್ಲಿಟ್ಟೆ! ಇಲ್ಲೇಕಿಟ್ಟೆ?’
ಅರಸುತಾ ಕಣ್ಣಲ್ಲೇ ಧರಿಸಿದವ
 ತರಿಸಿದ ನಗೆಯಲೆ
ಕಣ್ಮುಚ್ಚಿದ ಕಣ್ಣ ಮುಚ್ಚಾಲೆ

ಆರಾಮ ಕುರ್ಚಿಗೆ ಆ ಶ್ರೀರಾಮನ ಪಾದ
ಸೀತೆ ನೀವುತ್ತಿದ್ದ ನೆನಪಿನನಂಟು
ಅಜ್ಜಿಯ ನಿಟ್ಟುಸಿರು ತುಂಬಿ ತುಳುಕಿದ
ಕಂಡು ಕೇಳರಿಯದ ಕಾಡಿನ
ಕಂಡೂ ಕಾಣದ ಮರದ 
ನಿರುತ್ತರ ಕಾಂಡ 

ಸಮರಸವೇ ಜೀವನವೆಂದು ಸಾರಿದ
ವೀಳೇಯದ ಕೆಂಪುಗುಳಿನ ರಸ
ಜಗಲಿ ತುಂಬಾ ಗಲೀಜು
ಸದಾ ಸ್ವಚ್ಛ ಅಂಗಳದಲಿ
ರಂಗವಲ್ಲಿಯ ಬೊಚ್ಚು ಮಂದಹಾಸ 

ಆವಾಹಿಸಿದ ಹಾಗಿದೆ ಅವನ ಆತ್ಮ
ಇವೆಲ್ಲವುಗಳ ಒಳಗೆ
ಬಾಳ ಸಂಜೆಯಲಿ ನಾವಲ್ಲ ಇವೆಲ್ಲ
ಅವನಿಗೆ ಆಪ್ತವಾಗಿದ್ದ ಹಾಗೆ

Saturday, May 5, 2018


‘ತುಷಾರ’ದಲ್ಲಿ ಪ್ರಕಟವಾದ ನನ್ನ ಲೇಖನ  
ಆಲಸಿಯೊಬ್ಬ ಕಾರ್-ಕರ್ತನಾದ ಕತೆ 

ಅವನೊಬ್ಬ ಉದಾಸಿನದ ಮುದ್ದೆ. ಎಳವೆಯಿಂದಲೇ ಹಾಗೇನೆ! ಮೈಮುರಿದು ದುಡಿಯುವ ಬದಲು ಮೈಮುರುಟಿ ಮಲಗುವುದರಲ್ಲಿ ಅವನು ಮುಂದು. ಅವನು ಜನಿಸಿದ್ದು 1863 ಜುಲೈ 30ರಂದು ಯು ಎಸ್ ಮಿಶಿಗನ್ ವೇಯ್ನ್ ಕೌಂಟಿ ಎಂಬ ಹಳ್ಳಿಯೊಂದರಲ್ಲಿ.

ಅವನ ಬಾಳಿನಲ್ಲಿ ಮಹತ್ವದ ತಿರುವಿಗೆ ಕಾರಣವಾದದ್ದು ಒಂದು ಪುಟ್ಟ ಗಡಿಯಾರ. 13 ವರ್ಷದ ಬಾಲಕನಾಗಿದ್ದಾಗ ಅವನ ತಂದೆ ನೀಡಿದ ಅಕ್ಕರೆಯ ಉಡುಗೊರೆಯದು. ಆದರೆ ಅವನು ಪಾಕೆಟ್ವಾಚ್ ಮರ್ಮ ಭೇದಿಸಿದ. ಅದನ್ನು ಬಿಚ್ಚಿ, ಅದರ ಹಂದರವನ್ನು ಬಿಡಿಸಿ, ಹಾಗೇ ಮರು ಜೋಡಣೆ ಮಾಡಿ ಬಂಧು ಬಳಗದ, ನೆರೆಕರೆಯವರ ಹುಬ್ಬೇರುವಂತೆ ಮಾಡಿದ. ಅವರಾದರೋ, ತಮ್ಮ ಟೈಂಪೀಸ್ ಇತ್ಯಾದಿಗಳನ್ನು ಅವನಿಗೆ ಕೊಟ್ಟು ರಿಪೇರಿ ಮಾಡಿಸಿಕೊಳ್ಳಲು ಶುರುಮಾಡಿದರು. ಅಲ್ಲಿಂದ ಅವನಿಗೆ ಅದೊಂದು ಗೀಳಾಯಿತು. ಮತ್ತದು ಅವನ ಪಾಲಿಗೆ ವರವಾಯಿತು. ಲಿಯನಾರ್ಡೊ ಡಾ ವಿಂಚಿ ಹೇಗೆ ಕಪ್ಪೆ, ಜಿರಳೆಗಳನ್ನು ಕತ್ತರಿಸಿ ಅವುಗಳ ದೇಹರಚನೆಯನ್ನು ತಿಳಿಯಲು ಪ್ರಯತ್ನಿಸಿದ್ದನೋ ಅದೇ ರೀತಿ ಬಾಲಕ ಯಂತ್ರಗಳನ್ನು ಬಿಚ್ಚಿ ಬಿಚ್ಚಿ ಜೋಡಿಸಿಟ್ಟು ರಿಪೇರಿ ಕೆಲಸಗಳಿಗೂ ಮುಂದಾದ. ಅದರಲ್ಲಿ ಸೈ ಎನಿಸಿಕೊಂಡ.
ಆದರೇನು ಫಲ? ಒಂದು ಕಾಯಂ ಉದ್ಯೋಗ ಇಲ್ಲದವ ಇತರರÀ ಪಾಲಿಗೆ ದಂಡಪಿಂಡ. ಉಂಡಾಡಿಗುಂಡನಂತೆ ಬೆಳೆದವ, ಕಲಿಕೆಯಲ್ಲಿ ಬೇಸಾಯದಲ್ಲಿ ಯಾವುದರಲ್ಲೂ ಆಸಕ್ತಿ ಪ್ರಕಟಿಸದ ಹುಡುಗ, ಹದಿನೈದರ ಹರೆಯದಲ್ಲೇ ಶಾಲೆ ತೊರೆದು ಆಂಡಲೆÀದದ್ದರಲ್ಲಿ ಆಶ್ಚರ್ಯವೇನು?
ಆದರೆÀ ‘ಚಾರಿತ್ರಿಕ ಅವಶ್ಯಕತೆ’ (ಹಿಸ್ಟೋರಿಕಲ್ ನೆಸೆಸ್ಸಿಟಿ) ಅನ್ನುವುದು ಅಮೆರಿಕಾದ ಕೈಗಾರಿಕಾ
ಕ್ರಾಂತಿಯಲ್ಲಿ ಅವನಿಗೆ ಮಹತ್ತರವಾದ ಪಾತ್ರವನ್ನು ವಹಿಸಲು ನಿಶ್ಚಯಿಸಿತ್ತು ಮತ್ತು ಅದರ ದೆಸೆಯಿಂದ ಎಂಬಂತೆ ಅವನು ಆಂಡಲೆಯುತ್ತಾ ಡೆಟ್ರಾಯ್ಟ್ ನಗರ ತಲುಪಿದ. ಅದು ಹೇಳಿ ಕೇಳಿ ಆಟೋಮೊಬೈಲ್ ರಂಗದ ಕಾಶಿ! ಅಲ್ಲಿ ಅವನು ಅಪ್ರೆಂಟಿಸ್ ಆಗಿ ಕಾರ್ಖಾನೆಯೊಂದನ್ನು ಸೇರಿದ. ದುರಂತವೆಂದರೆ ಮೊತ್ತಮೊದಲ ಬಾರಿ ಗಿಟ್ಟಿಸಿಕೊಂಡ ಕೆಲಸದಿಂದ ಮೊತ್ತಮೊದಲ ಬಾರಿ ವಜಾಗೊಂಡ.

ಮರಳಿ ಮಣ್ಣಿಗೆಎಂದು ಮಿಶಿಗನ್ ತಲುಪಿದವ ಕ್ಲಾರಾ ಎಂಬವಳನ್ನು ಮದುವೆಯಾದ, ಮಗ ಎಡ್ಸೆಲ್ನೊಂದಿಗೆ ಸಂಸಾರ ಹೂಡಿದ, ಬೇಸಾಯ ಮಾಡಿದ. ಎಲ್ಲಾ ಹೆಚ್ಚೆಂದರೆ ಮೂರು ವರ್ಷ. ಕಾಲಿಗೆ ಚಕ್ರಕಟ್ಟಿಕೊಂಡವನನ್ನು, ಅವನಿಗೆ ತೃಪ್ತಿ ನೀಡದ ಬೇಸಾಯ ಎಷ್ಟು ಕಾಲ ಹಿಡಿದಿಟ್ಟೀತು? ಪುನಃ ಓವರ್ ಟು ಡೆಟ್ರಾಯ್ಟ್! 1893ರಲ್ಲಿಎಡಿಸನ್ ಇಲ್ಯುಮಿನೇಟಿಂಗ್ ಕಂಪನಿಅವನನ್ನು ಇಂಜಿನೀಯರ್ ಆಗಿ ಆಯ್ಕೆ ಮಾಡಿತು. ಅದೇ ವರ್ಷ ಮುಖ್ಯ ಇಂಜಿನೀಯರ್ ಆಗಿ ಬಡ್ತಿ ಪಡೆದದ್ದು ಅವನ ಪ್ರತಿಭೆಗೆ ಸಂದ ಮನ್ನಣೆಯಾಗಿತ್ತು. ಅಪ್ರೆಂಟಿಸ್ ಆಗಿದ್ದಾಗಲೇ ಉಗಿಯಂತ್ರಗಳ ಒಳಹೊರಗುಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಅವನಿಗೆ ತನ್ನ ಕನಸಿಗೆ ಜೀವ ತುಂಬಲು ಕಾಲ ಕೂಡಿಬಂದಿತ್ತು.

1896 ಜೂನ್ 4 ರಂದು ಡೆಟ್ರಾಯ್ಟ್ ನಗರದ ಮನೆಯೊಂದರ ಮುಂದೆ ನಾಲ್ಕು ಚಕ್ರಗಳ ಕೌತುಕವೊಂದು ನಿಂತಿದೆ. ಅದಕ್ಕೊಬ್ಬ ಫಿನಿಶಿಂಗ್ ಟಚ್ ನೀಡುತ್ತಿದ್ದಾನೆ. ಅದನ್ನು ಅಕ್ಕರೆಯಿಂದ ಕ್ವಾಡ್ರಿಸೈಕಲ್ ಎಂದು ಕರೆಯುವ ಅವನ ಪಾಲಿಗೆ ಅದು ಶುಭ ನುಡಿವ ಹಕ್ಕಿಯಾಗುತ್ತದೆ. ಅವನು ಕನಸು ಕಂಡಂತೆ, ಕುದುರೆಗಳು ಎಳೆಯದಿದ್ದರೂ ಅದು ತಾನಾಗಿಯೇ ಓಡುತ್ತದೆ, ಪೆಟ್ರೋಲ್ (ಅಮೆರಿಕನ್ನರು ಗ್ಯಾಸೊಲೀನ್ ಅನ್ನುತ್ತಾರೆ) ಕುಡಿದು!

ಅದೇ ವರ್ಷ ಅವನು ಎಡಿಸನ್ ಕಂಪನಿಯ ಇಕ್ಸಿಕ್ಯೂಟಿವ್ಗಳ ಸಭೆಯಲ್ಲಿ ಆವಿಷ್ಕಾರಗಳ ಗಾರುಡಿಗನೆನಿಸಿದ ಥಾಮಸ್ ಆಲ್ವಾ ಎಡಿಸನ್ ಎದುರು  ಆಟೋಮೊಬೈಲ್ ನಲ್ಲಿ ತನ್ನ ನೂತನ ಯೋಜನೆಗಳನ್ನು ಮುಂದಿಡುತ್ತಾನೆ. ಎಡಿಸನ್ ಅವನಿಗೆ ಮೊದಲಿಗಿಂತ ಇನ್ನೂ ಉತ್ತಮವಾದ ಮಾಡೆಲ್ ತಯಾರಿಸುವಂತೆ ಸಲಹೆ ನೀಡುತ್ತಾನೆ.

ಎಡಿಸನ್ನಿಂದ ಉತ್ತೇಜನಗೊಂಡ ಕಾರ್ಕರ್ತ 1903ರಲ್ಲಿ ತನ್ನದೇ ಹೆಸರಿನ ಕಂಪನಿಯೊಂದನ್ನು ಸ್ಥಾಪಿಸುತ್ತಾನೆ. ಅದುವೇ ಫೋರ್ಡ್ ಮೋಟಾರ್ ಕಂಪನಿ. ಅಂದಹಾಗೆ, ಅವನ ಹೆಸರು-ಹೆನ್ರಿ ಫೋರ್ಡ್. ಕಾಲಕ್ಕೆ ಪ್ರಪಂಚದಲ್ಲೇ ಅತಿದೊಡ್ಡ ಕಾರ್ಖಾನೆ ಸ್ಥಾಪಿಸಿದ ಫೋರ್ಡ್ ಒಂದು ದೇಶದ ಆರ್ಥಿಕತೆಯನ್ನೇ ಹಿಂದೆ ಮುಂದೆ ತಳ್ಳುವಷ್ಟು ಬಲಶಾಲಿಯಾದ ಕಾರ್ಗಳನ್ನು ಉತ್ಪಾದಿಸಿದ. ಅಂತೆಯೇ ಮಾರುಕಟ್ಟೆಗಿಳಿದ ಕ್ವಾಡ್ರಿಸೈಕಲ್ಗಳು ಅಮೆರಿಕಾದ ರಸ್ತೆಗಳಲ್ಲಿ ಧೂಳೆಬ್ಬಿಸಿದ್ದು ಈಗ ಇತಿಹಾಸ. ಬದುಕಿರುವಾಗಲೇ ಒಂದು ದಂತಕತೆಯಾದ ಫೋರ್ಡ್, ನಿಬ್ಬೆರಗಾಗಿಸುವ ಯಶಸ್ಸಿಗೆ, ಒಂದಿಷ್ಟು ಎಡಬಿಡಂಗಿತನಕ್ಕೆ, ಮಾಲಿಕ-ನೌಕರ ಸಂಬಂಧಗಳಲ್ಲಿ ಹೊಸ ಭಾಷ್ಯಕ್ಕೆ ನಿದರ್ಶನವೆನಿಸಿದ.


ಹೀಗಿದ್ದರೂ, ಹೆನ್ರಿ ಫೋರ್ಡ್ನ್ನು ಕಾರುಗಳ ಸಂಶೋಧಕ ಎನ್ನುವಂತಿಲ್ಲ. ಆದರೇನಂತೆ, ಕಾರುಗಳ ಉತ್ಪಾದನೆಯ ಪಾಲಿಗೆ ಅವನ ಮಹತ್ವ ಚಾರಿತ್ರಿಕ. ಪರ್ಸನಲ್ ಕಂಪ್ಯೂಟರ್ಗಳ ಪಾಲಿಗೆ ಬಿಲ್ ಗೇಟ್ಸ್ ಹೇಗೋ, ಕಾರುಗಳ ಪಾಲಿಗೆ ಹೆನ್ರಿ ಫೋರ್ಡ್ ಎನ್ನಬಹುದು. ಬಿಲ್ ಗೇಟ್ಸ್ ಕಂಪ್ಯೂಟರ್ಗಳನ್ನುಬಳಕೆದಾರ-ಸ್ನೇಹಿಮಾಡುವಲ್ಲಿ ಯಶಸ್ವಿಯಾದ ಹಾಗೆ ಹೆನ್ರಿ ಫೋರ್ಡ್ ಕಾರುಗಳನ್ನು ಜನಪ್ರಿಯಗೊಳಿಸಿದ. ತೀರಾ ತುಟ್ಟಿಯೆನಿಸಿದ್ದ ಕಾರುಗಳ ನಡುವೆ ಅಗ್ಗವೆನಿಸಿದ, ಅಮೆರಿಕನ್ನರ ಪಾಲಿಗೆ ಅಕ್ಕರೆಯ ಮಾಡೆಲ್ಟಿಕಾರುಗಳು ( ಟಿನ್ ಲಿಝ್ಝಿ ಅನ್ನುವುದರ ಹ್ರಸ್ವ ರೂಪ)  ಮುನ್ನುಗ್ಗಿ ಬಂದುದು ಕೈಗಾರಿಕಾ ಚರಿತ್ರೆಯ ಪವಾಡಗಳಲ್ಲಿ ಒಂದು.
ನಿಜ ಹೇಳಬೇಕೆಂದರೆ, ಮೊದಮೊದಲು ಮಾಡೆಲ್ಟಿಕೂಡಾ ದುಬಾರಿಯನಿಸಿತ್ತು.
850 ಡಾಲರ್ ಬೆಲೆಯಲ್ಲಿ. ಆದರೆ ಹಲವರು ತುಳಿದ ದಾರಿಯ ಬದಲಿಗೆ, ಫೋರ್ಡ್ ಹೊಚ್ಚ ಹೊಸದೊಂದು ದಾರಿ ತುಳಿದದ್ದು, ಮಾಡೆಲ್ಟಿ ಪಥದಲ್ಲಿ ಹೊಸ ಸಂಚಲನಕ್ಕೆ ನಾಂದಿಯಾಯಿತು.
ನೀವು ಯಂಡಮೂರಿ ವೀರೇಂದ್ರನಾಥರಅಭಿಲಾಷ ಕ್ಲೈಮ್ಯಾಕ್ಸ್ ನ್ನು ಉಸಿರು ಬಿಗಿಹಿಡಿದು ಓದಿದ್ದೀರಲ್ಲ? ಅದರಲ್ಲಿ ಮುಖ್ಯ ಪಾತ್ರ ವಹಿಸುವುವುದು ಕನ್ವೇಯರ್ ಬೆಲ್ಟ್ ಮತ್ತು ಅದು ಅಸೆಂಬ್ಲಿ ಲೈನ್ ಉತ್ಪಾದನೆಯ ಒಂದು ಮುಖ್ಯ ಭಾಗ.
ಹೆನ್ರಿ ಫೋರ್ಡ್ ಕಾರುಗಳ ಉತ್ಪಾದನೆಯಲ್ಲಿ ಮೊತ್ತ ಮೊದಲಾಗಿ ಪರಿಚಯಿಸಿದ ಅಸೆಂಬ್ಲಿ ಲೈನ್ ವಿಧಾನ ಕೈಗಾರಿಕಾ ಕ್ರಾಂತಿಗೆ ವಿಶಿಷ್ಟ ಕೊಡುಗೆ ನೀಡಿತು.
ಮೂಳೆ ಮಾಂಸದ ತಡಿಕೆಎಂಬ ಹಂತದಲ್ಲಿರುವ ಕಾರುಗಳು ಕನ್ವೇಯರ್ ಬೆಲ್ಟ್ನಲ್ಲಿ ಸಾಲುಸಾಲಾಗಿ ಸಾಗುತ್ತಿರುವಂತೆ, ಸಾಲಾಗಿ ನಿಂತಿರುವ ಶಿಸ್ತಿನ ಕಾರ್ಮಿಕರು, ಅದರೊಳಗೊಂದು ಬಿಡಿಭಾಗ ಸೇರಿಸುವುದು, ಸ್ಕ್ರೂ ಗಟ್ಟಿ ಮಾಡುವುದು...ಹೀಗೆ ಪ್ರತಿಯೊಬ್ಬನೂ ತನಗೆ ನಿಗದಿ ಪಡಿಸಿದ ಕೆಲಸವನ್ನು ಮಾಡುತ್ತಿರುತ್ತಾನೆ. ಅಸೆಂಬ್ಲಿ ಲೈನ್ ವಿಧಾನದಿಂದ ಫೋರ್ಡ್ ಒಂದು ಪವಾಡ ಮಾಡಿ ತೋರಿಸಿದ. 1912ರವೆರೆಗೆ, ಒಂದು ಫೋರ್ಡ್ ಕಾರನ್ನು ಅಸೆಂಬಲ್ ಮಾಡಲು, ಅರ್ಧ ದಿನ ತಗಲುತ್ತಿತ್ತಾದರೆ, 1914ರಿಂದ-ಅಸೆಂಬ್ಲಿ ಲೈನ್ ಅಳವಡಿಸಿದ ಬಳಿಕ-ಅದು ಒಂದೂವರೆ ಗಂಟೆಗೆ ಇಳಿಯಿತು. ಅಂದರೆ ಅರ್ಧ ದಿನದಲ್ಲಿ, ಏಳೆಂಟು ಕಾರುಗಳು ರೆಡಿ! ಇನ್ನೆಲ್ಲಿಯ ಸ್ಪರ್ಧೆ ಫೋರ್ಡ್ಗೆ?

ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಫೋರ್ಡ್ ಕಂಪನಿ, ಬಿಡಿ ಭಾಗಗಳನ್ನು ಇತರರಿಂದ ದುಬಾರಿ ಬೆಲೆಗೆ ಖರೀದಿಸುವ ಬದಲು ತಾನೇ ಅವುಗಳನ್ನು ಉತ್ಪಾದಿಸತೊಡಗಿತು. ಕಾರುಗಳನ್ನು ದೂರದ ಊರುಗಳಿಗೆ ಸಾಗಾಟ ಮಾಡುವ ಬದಲು, ಮೊದಲು ಬಿಡಿ ಭಾಗಗಳನ್ನು ಸಾಗಾಟ ಮಾಡಿ ಮಾರಾಟ ಕೇಂದ್ರಗಳಲ್ಲೇ ಅವುಗಳನ್ನು ಅಸೆಂಬಲ್ ಮಾಡುವ ಸಂಪ್ರದಾಯ ಶುರುಮಾಡಿತು. ಇದರಿಂದ ಕಾರುಗಳ ಸಾಗಾಟ ವೆಚ್ಚದಲ್ಲಿ ಗಣನೀಯ ಇಳಿಕೆಯಾಯಿತು. 1913ರಲ್ಲಿ 500 ಡಾಲರ್ ಬೆಲೆ ಬಾಳುತ್ತಿದ್ದ ಮಾಡೆಲ್ಟಿ’, 1925 ರಲ್ಲಿ 260 ಡಾಲರ್ ಗಳಿಗೆ ಬಿಕರಿಯಾಗತೊಡಗಿತು. ಅಂದರೆ, ಅಮೆರಿಕಾದ ಸಾಮಾನ್ಯ ಸ್ಥಿತಿವಂತ ಕುಟುಂಬಗಳಿಗೂ ಮಾಡೆಲ್ಟಿಕೈಗೆಟಕುವಂತಾಯಿತು. ಸುಲಭ ಚಾಲನೆ, ಅಗ್ಗದ ರಿಪೇರಿ ಅಂಶಗಳು ಕೂಡಾ ಮಾಡೆಲ್ಟಿಯನ್ನು ಜನಪ್ರಿಯತೆಯ ಶಿಖರ ತಲುಪುವಂತೆ ಮಾಡಿದವು. ಎಷ್ಟೆಂದರೆ, 1918ರಲ್ಲಿ ಅಮೆರಿಕಾದ ಕಾರುಗಳಲ್ಲಿ ಅರ್ಧಕ್ಕರ್ಧ ಇವುಗಳದ್ದೇ ಕಾರುಬಾರು. ಮಾಡೆಲ್ಟಿಹಲವು ವರ್ಷಗಳ ಕಾಲ ನೂರಕ್ಕೆ ನೂರು ಲಾಭ ಗಳಿಸುತ್ತಾ ಹೋಯಿತು. 

1914ರಲ್ಲೇ ಫೋರ್ಡ್ ತನ್ನ ಸಿಬ್ಬಂದಿಗೆ ನೀಡುತ್ತಿದ್ದ ಕನಿಷ್ಠ ವೇತನವನ್ನು ಹೆಚ್ಚಿಸಿದ್ದ-ಅದು ಇತರರು ಪಡೆಯುವ ಮಜೂರಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಾಗಿತ್ತು. ಮಾತ್ರವಲ್ಲ ದುಡಿತದ ಅವಧಿಯನ್ನು 9ರಿಂದ 8 ಗಂಟೆಗೆ ಇಳಿಸಿದ. ಅಂದಿನ ದಿನಗಳಲ್ಲಿ ಕೆಲಸಗಾರರು ಫೋರ್ಡ್ ಕಂಪನಿ ಸೇರಲು ಮುಗಿಬೀಳುತ್ತಿದ್ದುದರಲ್ಲಿ ಆಶ್ಚರ್ಯವೇನು ಬಂತು? ಅಷ್ಟು ಸಾಲದು ಎಂಬಂತೆ, ಕಂಪನಿಯ ಲಾಭದಲ್ಲಿ ಒಂದು ಪಾಲನ್ನು ಕೆಲಸಗಾರರಿಗೆ ತೆಗೆದಿಡುವ ಪರಿಪಾಠವನ್ನೂ ಶುರು ಮಾಡಿದ ಫೋರ್ಡ್.
ಆದರೆ ಪಾಲು ನೀಡುವ ಮುನ್ನ, ಅವರು ಕುಡುಕರೆ? ಜೂಜುಕೋರರೆ? ಇತರ ಅಸಭ್ಯ ನಡವಳಿಕೆ ಉಳ್ಳವರೆ? ಮರ್ಯಾದೆಯಿಂದ ಜೀವಿಸುತ್ತಿರುವರೇ? ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಿ ಅವರ ಅರ್ಹತೆಯನ್ನು ಕಂಪನಿಯಸಾಮಾಜಿಕ ಖಾತೆನಿರ್ಧರಿಸುತ್ತಿತ್ತು ಎನ್ನವುದು ವಿಶೇಷ! 

1920 ಬಂತು. ಅಲ್ಲಿಂದ ಶುರು ಮಾಡಿ, ಪ್ರತೀ ವರ್ಷ ಜನರಲ್ ಮೋಟಾರ್ಸ್ ಹೊಚ್ಚ ಹೊಸ ಮಾಡೆಲ್ಗಳು ಅಮೆರಿಕಾದ ರಸ್ತೆಗಿಳಿಯತೊಡಗಿದವು. ಆದರೆ ಫೋರ್ಡ್ ಮಾಡೆಲ್ಟಿಮಾತ್ರನೋಡಿ ಸ್ಯಾಮ್ ನಾವಿರೋದು ಹೀಗೆಎಂದು ಕಿಂಚಿತ್ತೂ ಬದಲಾಗದೇ ಮುಂದುವರಿಯಿತು, ನಮ್ಮ ಅಂಬಾಸಿಡರ್ ಹಾಗೆ. ಅದರ ಕಪ್ಪು ಬಣ್ಣ, ಚರ್ಮದ ಬಣ್ಣ ಅನ್ನುವ ಹಾಗೆ ಸ್ಥಿರವಾಗಿ ಹೋಯಿತು. 1927ರಲ್ಲಿ ಫೋಡ್ ಪರಿಚಯಿಸಿದ ಮಾಡೆಲ್ಆಗಲಿ, 1932ರಲ್ಲಿ ಪರಿಚಯಿಸಿದ ವಿ-8 (ಇಂಗ್ಲಿಷ್ ವಿಅಕ್ಷರದ ಆಕಾರದಲ್ಲಿ ಎಂಟು ಸಿಲಿಂಡರ್ಗಳನ್ನು ಜೋಡಿಸಿರುವಂತಹ ಶಕ್ತಿಯುತವಾದ ಇಂಜಿನ್ ಹೊಂದಿರುವ ವಾಹನ)...ಊಹುಂ! ಯಾವುವೂ ಕಾಲಕ್ಕೆ ಜನರೆಲ್ಲರ ಮನಗೆದ್ದ   ಜನರಲ್ ಮೋಟಾರ್ಸ್ ಕಾರುಗಳ ಎದುರು, ಫೋರ್ಡ್ನ್ನು ಗೆಲ್ಲಿಸಲಾರದೆ ಹೋದವು.
1930 ಕೊನೆಯಿಂದ ಫೋರ್ಡ್ ಕಾರುಗಳ ಇಳಿಜಾರು ಪಯಣ ಮುಂದುವರಿಯಿತು. 1945ರಲ್ಲಿ ಹೆನ್ರಿ ಫೋರ್ಡ್ ಮೊಮ್ಮಗ ಕಂಪನಿಯ ಉಸ್ತುವಾರಿ ವಹಿಸಿದ ಬಳಿಕ ಫೋರ್ಡ್
ನಿರ್ವಣಾ ವಿಧಾನಗಳು ಸಾಕಷ್ಟು ಟೀಕೆಗಳಿಗೆ ಗುರಿಯಾದವು.
ಆದರೆ, ಫೋರ್ಡ್ ತನ್ನ ಜೀವನದ್ರವ್ಯ ಕೇವಲ ಕಾರುಗಳ ಚಾಲನೆಯಲ್ಲಿ ವ್ಯಯವಾಗದಂತೆ ಆಗಲೇ ನೋಡಿಕೊಂಡಿದ್ದ. ಆರ್ಥಿಕ ಯಶಸ್ಸಿನ ತರುವಾಯ ಶೈಕ್ಷಣಿಕ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಅವನು ಸಕ್ರಿಯನಾದ. ರಾಜಕೀಯದಲ್ಲೂ ಕೈಯಾಡಿಸಿದ. ಮೊದಲನೇ ಮಹಾಯುದ್ಧವನ್ನು ವಿರೋಧಿಸಿದ್ದ ಫೋರ್ಡ್ ಯುರೋಪ್ಗೆ ಹೊರಟ ಶಾಂತಿ ಧೂತ ಹಡಗಿಗೆ ದೇಣಿಗೆ ನೀಡಿದ್ದ! 1930ರಲ್ಲಿ ಅವನ ಕುಟುಂಬ ಸ್ಥಾಪಿಸಿದ ಫೋರ್ಡ್ ಫೌಂಡೇಶನ್ ಇಂದು ವಿಶ್ವವ್ಯಾಪಿಯಾಗಿದೆ. ಸಮಾಜ ಸೇವೆಗೆ ಹೆಸರುವಾಸಿಯಾಗಿದೆ. (ಟೀಕೆಗಳಿಗೂ ಗುರಿಯಾಗಿದೆ!). ಮಾತ್ರವಲ್ಲ, ‘ಗ್ರೀನ್ ಫೀಲ್ಡ್ ವಿಲೇಜ್ಹಾಗೂಹೆನ್ರಿ ಫೋರ್ಡ್ ವಿಲೇಜ್ಹೆಸರಿನ ಎರಡು ಮ್ಯೂಸಿಯಂಗಳನ್ನು ಅವನು ಮಿಶಿಗನ್ ನಲ್ಲಿ ಸ್ಥಾಪಿಸಿದ.
ಏಪ್ರಿಲ್ 7 1917ರಂದು, ತನ್ನ 83ನೇ ವರ್ಷದಲ್ಲಿ ಮಿದುಳಿನ ರಕ್ತಸ್ರಾವದಿಂದ ಫೋರ್ಡ್ ಇಹಲೋಕ ತ್ಯಜಿಸಿದ.    

1956ರಲ್ಲಿ ಫೋರ್ಡ್ ಕಂಪನಿಯ 10,200,000 ಶೇರ್ಗಳನ್ನು ಸಾರ್ವಜನಿಕರಿಗೆ ವಿಕ್ರಯಿಸುವುದರೊಂದಿಗೆ ಕಂಪನಿಯ ಮೇಲೆ ಫೋರ್ಡ್ ಪರಿವಾರದ ಏಕಾಧಿಪತ್ಯದ ಏಕಾಂಕಕ್ಕೆ ತೆರೆ ಬಿತ್ತು. ಕಾಲಕ್ಕೆ ಸಿಂಗಲ್ ಸ್ಟಾಕ್ ಇಶ್ಯೂಗಳಲ್ಲಿ ಅದೊಂದು ದಾಖಲೆ. ಅಲ್ಲಿಂದ ಫೋರ್ಡ್ ಮೋಟಾರ್ ಕಂಪನಿ, ಒಂದು ಸಾರ್ವಜನಿಕ ಕಂಪನಿಯಾಯಿತು. ಅಮೆರಿಕಾದಾದ್ಯಂತ 75 ಅಸೆಂಬ್ಲಿ ಹಾಗೂ ತಯಾರಿಕಾ ಪ್ಲಾಂಟ್ಗಳನ್ನು ಹೊಂದಿರುವ ಫೋರ್ಡ್ ಕಂಪನಿ ಇಂದು ಉಕ್ಕು, ವಿಮೆ ಹೀಗೆ ಹಲವು ರಂಗಗಳಿಗೆ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ.     

 ಹೆನ್ರಿ ಫೋರ್ಡ್ ಹುಟ್ಟಿದ ದಿನದಿಂದ ಇಂದಿನವರೆಗೆ ಭೂಮಿ, ಸೂರ್ಯನ ಸುತ್ತು  ಮಾಡಿರುವ ಪ್ರದಕ್ಷಿಣೆ 153. ಅವನು ಹುಟ್ಟು ಹಾಕಿದ ಲಕ್ಷಗಟ್ಟಲೆ ಕಾರುಗಳು ಲಕ್ಷಗಟ್ಟಲೆ ಬಾರಿ ಭೂಮಿ ಮೇಲೆ ಓಡಾಡಿವೆ, ಓಡಾಡುತ್ತಲಿವೆ. ಹತ್ತು ಹಲವು ಕಾರ್ ಕಂಪನಿಗಳ ನಡುವೆ ಪೈಪೋಟಿಯಲ್ಲಿ, ಫೋರ್ಡ್ ತನ್ನ ಏಕಸ್ವಾಮ್ಯದಿಂದ ಸ್ವಲ್ಪ ಹಿಂದೆ ಸರಿದಿದೆ, ನಿಜ. ಪುನ: ಬಿಲ್ ಗೇಟ್ಸ್ ಉದಾಹರಣೆಗೆ ಬಂದರೆ, ಇಂದು ಆಪಲ್ ಇತ್ಯಾದಿ ಕಂಪನಿಗಳ ಆವಿಷ್ಕಾರಗಳಿಂದ ಮೈಕ್ರೋಸಾಫ್ಟ್ ಕೊಂಚ ಕಳೆಗುಂದಿದೆ ಅನಿಸಬಹುದು. ಆದರೆ ಬಿಲ್ ಗೇಟ್ಸ್ ಹೇಗೆ ಐಟಿ ಆದ್ಯಪ್ರವರ್ತಕ ಎನ್ನುವುದು ವಿವಾದಾತೀತವೋ, ಹಾಗೇನೇ ಕಾರ್ ಉತ್ಪಾದನೆಯಲ್ಲಿ ಹೆನ್ರಿ ಫೋರ್ಡ್ ಪರಿಚಯಿಸಿದ ಕ್ರಾಂತಿಕಾರಿ ವಿಧಾನಗಳಿಂದ ಅವನು ಕಾರ್ ಕ್ಷೇತ್ರದ ಪ್ರಶ್ನಾತೀತ ಹರಿಕಾರ ಅನಿಸಿಕೊಳ್ಳುತ್ತಾನೆ.